ದತ್ತಾತ್ರೇಯ ರಾಮಚಂದ್ರ ಬೇಂದ್ರೆ : -  (೧೮೯೬-೧೯೮೧). ಕನ್ನಡದ ವರಕವಿ. ಕಾವ್ಯಗಾರುಡಿಗರು. ಜ್ಞಾನಪೀಠ ಪ್ರಶಸ್ತಿ ವಿಜೇತರು. ಅಂಬಿಕಾತನಯದತ್ತ ಇವರ ಕಾವ್ಯನಾಮ. ಹೊಸಗನ್ನಡ ಕಾವ್ಯ ಯಾವ ದಿಕ್ಕಿನಲ್ಲಿ ಹರಿಯಬೇಕೆಂಬುದರ ಬಗ್ಗೆ ಸ್ಪಷ್ಟನೆಯನ್ನು ಮೂಡಿಸಿ ಕನ್ನಡಭಾಷೆಯ ತಲಸ್ಪರ್ಶಿ ಶಬ್ದಗಳ ವ್ಯಂಜಕತೆಯನ್ನು ತಮ್ಮ ಕವನಗಳಲ್ಲಿ ಬಳಸಿ (ಗ್ರಾಂಥಿಕ, ಜಾನಪದ, ಲಯ, ಛಂದಸ್ಸು-ಎಲ್ಲ ವಿಷಯಗಳಲ್ಲೂ), ಅವನ್ನು ಅಭಿಜ್ಞವಾಗಿ ಮಾಡಿದ ಕವಿ. 1916-18ರಲ್ಲಿ ರಚಿಸಿದ ಕವನಗಳಿಂದ ಆರಂಭವಾದ ಇವರ ವಾಙ್ಮಯ ಕೃಷಿ ಕೊನೆಯ ಉಸಿರೆಳೆಯುವ ತನಕವೂ ನಿರಂತರವಾಗಿ ಸಾಗಿತ್ತು. ಎಂಬತ್ತೈದು ವರ್ಷದ ಕಾವ್ಯ ಜೀವನದಲ್ಲಿ ಇವರು ನೂರಾರು ಬಗೆ ಶಬ್ದ ಸೌಷ್ಠವ, ಛಂದಸ್ಸಿನ ವೈವಿಧ್ಯ, ಆಳವಾದ ಅರ್ಥಗೌರವಗಳಿಂದ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ಇವರನ್ನು ರವೀಂದ್ರನಾಥ ಠಾಕೂರರಿಗೆ ಹೋಲಿಸಲಾಗಿದೆ. 

	ಧಾರವಾಡದ ಪೋತ್ನಿಸ್ ಗಲ್ಲಿಯಲ್ಲಿ ಮರಾಠಿ ಮಾತಾಡುವ ಚಿತ್ಪಾವನ ಕುಟುಂಬದಲ್ಲಿ ಜನನ. ಇವರ ಅಜ್ಜ ಮೂಲತಃ ವೇದಪಾಠಕರ ಮನೆತನದವರು. ಇವರು ಹನ್ನೆರಡನೆಯ ವಯಸ್ಸಿನಲ್ಲಿ ತಂದೆಯನ್ನೂ ಮುಂದೆ ಕೆಲದಿನಗಳಲ್ಲೆ ಇಬ್ಬರು ತಮ್ಮಂದಿರನ್ನೂ ಕಳಕೊಂಡರು. ತಾಯಿ ಅಜ್ಜಿಯರಿಂದ ಸಾಕಲ್ಪಟ್ಟ ಈ ತರುಣ ಧಾರವಾಡದ ವಿಕ್ಟೋರಿಯ ಹೈಸ್ಕೂಲಿನಲ್ಲಿ, ಅನಂತರ ಚಿಕ್ಕಪ್ಪನ ಸಹಾಯ ಪಡೆದು ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪಾಸಾದರು. 1918ರಲ್ಲಿ ಧಾರವಾಡದ ವಿಕ್ಟೋರಿಯ ಹೈಸ್ಕೂಲಿನಲ್ಲಿ ಅದೇವರ್ಷ ಶಿಕ್ಷಕರಾಗಿ ಸೇರಿದರು. 1919ರಲ್ಲಿ ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿ ಎಂಬಾಕೆಯನ್ನು ವಿವಾಹವಾದರು. 1922 ರಿಂದ 1944ರ ಅವಧಿಯಲ್ಲಿ ಇವರು ನಾಲ್ಕು ಗಂಡುಮಕ್ಕಳನ್ನೂ ಇಬ್ಬರು ಹೆಣ್ಣು ಮಕ್ಕಳನ್ನೂ ಕಳಕೊಂಡರು. ಉಳಿದು ದೊಡ್ಡವರಾದ ಮಕ್ಕಳೆಂದರೆ ಪಾಂಡುರಂಗ, ವಾಮನ, ಮಂಗಲಾ. 1920ರಲ್ಲಿ ಇವರ ನೇತೃತ್ವದಲ್ಲಿ ಆರಂಭವಾದ ಗೆಳೆಯರ ಗುಂಪು ಮುಂದೆ 1933ರಲ್ಲಿ ಚದುರಿದರೂ ಅದರಲ್ಲಿ ಸೃಷ್ಟಿಶೀಲ ಅಭ್ಯಾಸಶೀಲ ತರಬೇತಿಯನ್ನು ಪಡೆದ ಲೇಖಕರು ಇಂದು ಕನ್ನಡ ಸಾಹಿತ್ಯದ ಮೂಂಚೂಣಿಯಲ್ಲಿ ನಿಂತಿದ್ದಾರೆ. 'ಸ್ವಧರ್ಮ, 'ಜಯಕರ್ನಾಟಕ ಸಂಚಿಕೆಗಳಲ್ಲಿ ತಮ್ಮ ಆಯ್ದ ಸಾಹಿತ್ಯ ಕೃತಿಗಳನ್ನು ಆ ಗುಂಪಿನವರು ಪ್ರಕಟಿಸತೊಡಗಿದರು. ಅನಂತರ ಜಯ ಕರ್ನಾಟಕವನ್ನು ಮುಖ ಪತ್ರವೆಂದು ನಡೆಸಲಾಯಿತು. ಬೇಂದ್ರೆಯವರ 'ಕೃಷ್ಣಾ ಕುಮಾರಿ' ಕವನ ಸಂಗ್ರಹ 1922ರಲ್ಲೇ ಪ್ರಕಟವಾಯಿತು. 1930ರಲ್ಲಿ ನಡೆದ ಲೇಖಕರ ಗೋಷ್ಠಿಗೆ ಬೇಂದ್ರೆ ಅಧ್ಯಕ್ಷರಾದರು. 1926ರಲ್ಲಿ ನಡೆದ ನಾಡಹಬ್ಬವನ್ನು ಕರ್ನಾಟಕದ ಸಾರ್ವಜನಿಕ ಹಬ್ಬವೆಂದು ಗುರುತಿಸಿ ಅದನ್ನು ಎಲ್ಲ ಕಡೆಗೂ ವ್ಯಾಪಿಸುವಂಥ ತೀವ್ರ ಕಾರ್ಯಕ್ರಮಗಳನ್ನು ಕೈಗೊಂಡರು. 1918ರಲ್ಲಿ ಧಾರವಾಡದಲ್ಲಿ ಜರಗಿದ 4ನೆಯ ಅ.ಕ.ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಚುರಗೊಂಡ ಇವರ ಕವನಗಳು 1932ರಲ್ಲಿ 'ಗರಿ' ಎಂಬ ಪುಸ್ತಕದಲ್ಲಿ ಸಂಕಲಿತವಾದುವು. ಆಗ ಕನ್ನಡದಲ್ಲಿ ಭಾವಗೀತೆಯ ಹೊಸ ಅಲೆಯೊಂದು ಉದಯವಾಯಿತು. ನವೋದಯ ಕಾವ್ಯದ ಜನರಲ್ಲಿ ಒಬ್ಬರೆನಿಸಿದರು.

	ಗರಿ' ಸಂಗ್ರಹದಲ್ಲಿ ಪ್ರಕಟವಾದ 'ನರಬಲಿ ಕವನ ಸರ್ಕಾರದ ವಿರುದ್ಧ ಕಟ್ಟಿದುದೆಂದು ಪರಿಗಣಿಸಿ ಮೂರು ತಿಂಗಳಕಾಲ ಹಿಂಡಲಗಿಯಲ್ಲಿ ಇವರು ಸೆರೆವಾಸ ಹಾಗೂ ಮುಗದದಲ್ಲಿ 'ನಜರ ಬಂಧಿ ಶಿಕ್ಷೆ ಅನುಭವಿಸಿ ಪುಣೆಯನ್ನು ಸೇರಿದರು. ಅಲ್ಲಿ ತಮ್ಮ ಕಕ್ಕನ ಆಶ್ರಯದಲ್ಲಿದ್ದುಕೊಂಡು 1935ರಲ್ಲಿ ಎಂ.ಎ. ಪಾಸು ಮಾಡಿದರು. ಇವರನ್ನು ರಾಜಕೀಯ ವ್ಯಕ್ತಿಯೆಂದು ತೀರ್ಮಾನಿಸಿದ ಸರ್ಕಾರ ಇವರಿಗೆ ಎಲ್ಲಿಯೂ ಕೆಲಸ ಸಿಗದಂತೆ ನೋಡಿಕೊಂಡಿತು. 1936ರಲ್ಲಿ ಪ್ರಕಟಗೊಂಡ ಇವರ ಹುಚ್ಚಾಟಗಳು ಎಂಬ ಏಕಾಂಕ ನಾಟಕಗಳ ಸಂಗ್ರಹ ಕನ್ನಡದಲ್ಲಿ ಅಬ್‍ಸರ್ಡ್ ನಾಟಕದ ಉದಯಕ್ಕೆ ಮುನ್ಸೂಚನೆ ನೀಡಿತು. ಇವರ 'ಹಕ್ಕಿ ಹಾರುತಿದೆ ನೋಡಿದಿರಾ ಮತ್ತು ಬೆಳಗು ಕವನಗಳನ್ನು ಮೆಚ್ಚಿಕೊಂಡ ಮಾಸ್ತಿಯವರು ಬೇಂದ್ರೆಯವರನ್ನು ಅವರ 'ಜೀವನ ಪತ್ರಿಕೆಗೆ ಸಂಪಾದಕರಾಗಿ ನೇಮಿಸಿಕೊಂಡರು (1939). ಇವರು 1934-41ರ ಅವಧಿಯಲ್ಲಿ 'ಮೂರ್ತಿ ಮತ್ತು ಕಾಮಕಸ್ತೂರಿ', 'ನಾದಲೀಲೆ, 'ಉಯ್ಯಾಲೆ, 'ಸಖೀಗೀತಗಳಂಥ ಶ್ರೇಷ್ಠ ಕವನ ಸಂಕಲನಗಳನ್ನೂ 'ಸಾಹಿತ್ಯ ಮತ್ತು ವಿಮರ್ಶೆಯಂಥ ಉತ್ತಮ ವಿಮರ್ಶಾಗ್ರಂಥವನ್ನೂ ನಿರಾಭರಣ ಸುಂದರಿಯಂಥ ಕಥೆ ಹರಟೆಗಳ ಸಂಕಲನವನ್ನೂ ಪ್ರಕಟಿಸಿದರು. ಈ ಕಾಲವನ್ನು ಬೇಂದ್ರೆ ಸಾಹಿತ್ಯದ ಸುಗ್ಗಿಯ ಕಾಲವೆಂದು ಗುರುತಿಸಲಾಗಿದೆ. 

	1941-42ರಲ್ಲಿ ಗದುಗಿನಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿದ್ದು ಮತ್ತೆ ಧಾರವಾಡಕ್ಕೆ ಮರಳಿದರು. 1943ರಲ್ಲಿ ಪುಣೆಯ ಕಾಮರ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಅನಂತರ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. (1944-56). ಇವರ 'ಕನ್ನಡ ಮೇಘದೂತ 1943ರಲ್ಲಿ ಪ್ರಕಟಗೊಂಡಿತು. ಅದೇ ವರ್ಷ ಶಿವಮೊಗ್ಗದಲ್ಲಿ ಜರುಗಿದ 27ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡರು. 1945ರಲ್ಲಿ 'ವಿಚಾರ ಮಂಜರಿ' ಪ್ರಕಟಿಸಿದರು. 1946ರಲ್ಲ್ಲಿ ಬೇಂದ್ರೆಯವರ ಐವತ್ತರ ಹುಟ್ಟುಹಬ್ಬ ಧಾರವಾಡದಲ್ಲಿ ನಿಧಿ ಅರ್ಪಣೆಯೊಂದಿಗೆ ವಿಜೃಂಭಣೆಯಿಂದ ಜರುಗಿತು. 1950ರಲ್ಲಿ ಪ್ರಕಟಗೊಂಡ ಇವರ ನಾಟಕ 'ಹೊಸ ಸಂಸಾರ ರಂಗದ ಮೇಲೆ ಪ್ರಯೋಗಗೊಂಡಿತು. 1951ರಲ್ಲಿ ಇವರ ಗಂಗಾವತರಣ ಕವನ ಸಂಕಲನ ಪ್ರಕಟಗೊಂಡಿತು. 1954ರಲ್ಲಿ 'ಜೈಮಿನಿ ಭಾರತಕ್ಕೆ ಮುನ್ನುಡಿ' ಎಂಬ ವಿಮರ್ಶಾ ಕೃತಿಯನ್ನು ಪ್ರಕಟಿಸಿದರು. 

	1955-57 ಇವರ ಜೀವನದ ಹರ್ಷದ ದಿನಗಳು, 'ಸೂರ್ಯಪಾನ, 'ಹೃದಯ ಸಮುದ್ರ, 'ಮುಕ್ತಕಂಠ, 'ಜೀವನಹರಿ', 'ಚೈತ್ಯಾಲಯ ಎಂಬ ಐದು ಸಂಗ್ರಹಗಳು ಮತ್ತು ಆ ಐದು ಸಂಗ್ರಹಗಳ ಸಂಕಲನ ಅರಳು-ಮರಳು ಕೃತಿ ಹೊರಬಂದುವು.

1956ರಲ್ಲಿ ಸೊಲ್ಲಾಪುರ ನೌಕರಿಯಿಂದ ನಿವೃತ್ತರಾದರು. ಅಲ್ಲಿಯ ಜನರು ಇವರ 60ನೆಯ ಹುಟ್ಟುಹಬ್ಬ ಆಚರಿಸಿ ಆ ಸಂದರ್ಭದಲ್ಲಿ ಕೂಡಿಸಿದ ನಿಧಿಯನ್ನು ಇವರ ಇಚ್ಚೆಯ ಮೇರೆಗೆ ಪಾಂಡಿಚೇರಿಯ ಅರವಿಂದ ಆಶ್ರಮಕ್ಕೆ ಕಳಿಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಬೆಂಗಳೂರಿನಲ್ಲಿ ಇವರನ್ನು ಸನ್ಮಾನಿಸಿತು.

	1956ರಲ್ಲಿ ಧಾರವಾಡದ ಸಾಧನಕೆರೆಯ ರಮ್ಯ ಪರಿಸರಕ್ಕೆ ಮರಳಿದ ಬೇಂದ್ರೆಯವರು 1966ರ ತನಕ ಧಾರವಾಡ ಆಕಾಶವಾಣಿ ನಿಲಯದ ಸಲಹೆಗಾರರಾಗಿ ಸೇರಿದರು. 1958-59ರಲ್ಲಿ ಇವರ 'ಅರಳು-ಮರಳು ಪಂಚ ಕಾವ್ಯ ಗುಚ್ಛಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರಕಿತು. ಮನೆಯಲ್ಲಿ ಶಾಂತಿ ನೆಲಸಿತು. ಪ್ರತಿ ವರ್ಷ ಒಂದೊಂದು ಕವನ ಸಂಗ್ರಹ ಬರುವಂತೆ ಆಯಿತು. 'ನಮನ (1958), 'ಸಂಚಯ (1959), 'ಉತ್ತರಾಯಣ' (1960), 'ಮುಗಿಲಮಲ್ಲಿಗೆ (1961), 'ಯಕ್ಷಯಕ್ಷಿ (1962), 'ನಾಕುತಂತಿ' (1964), 'ಮರ್ಯಾದೆ (1966) - ಈ ಸಂಕಲನಗಳಲ್ಲದೆ ಇವರ ವಿಮರ್ಶಾಗ್ರಂಥ 'ಕಾವ್ಯೋದ್ಯೋಗ (1962) ಪ್ರಕಟಗೊಂಡಿತು. ಆಗ ಇವರು ಕರ್ನಾಟಕದ ಹೊರಗೂ ಸಂಚರಿಸಿದರು. 1959ರಲ್ಲಿ ಇವರು ಮಹಾರಾಷ್ಟ್ರ ಸಾಹಿತ್ಯ ಪುಸ್ತಕ ಪ್ರಕಟನೆಗೊಂಡುದಲ್ಲದೆ 1965ರಲ್ಲಿ ಇವರ ಮರಾಠಿ ಗದ್ಯಪದ್ಯ ವಿಮರ್ಶಾಸಂಗ್ರಹ 'ಸಂವಾದ ಹಾಗೂ 'ವಿಠಲಸಂಪ್ರದಾಯ ಪ್ರಕಟಗೊಂಡವು. 'ಸಂವಾದಕ್ಕೆ ಮಹಾರಾಷ್ಟ್ರದ ಕೇಳ್‍ಕರ್ ಪ್ರಶಸ್ತಿ ದೊರಕಿತು. 1966ರಲ್ಲಿ ಶಿರಹಟ್ಟಿಯಲ್ಲಿ ಇವರ 70ನೆಯ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅದೇ ವರ್ಷ ಇವರಿಗೆ ಪತ್ನಿವಿಯೋಗವಾಯಿತು (17-8-1966). ಅದೇ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸಾಹಿತಿಗಳಿಗೆ ನೀಡುವ ಮಾಸಾಶನವನ್ನೂ ನೀಡಿತು. ಹೈದರಾಬಾದ್ ಹಿಂದೀ ಪ್ರಚಾರ ಸಭಾದವರು ಸಾಹಿತ್ಯ ಆಚಾರ್ಯ ಪದವಿಯನ್ನೂ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿದುವು. ಈ ಗೌರವದ ಫಲವಾಗಿ ಇವರ 'ಮರ್ಯಾದೆ ಕವನ ಸಂಕಲನ (1966) ಪ್ರಕಟಗೊಂಡಿತು. 

	1968ರಲ್ಲಿ ಇವರಿಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನೂ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿದುವು. 1969ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋ ಆದರು. 1972ರಲ್ಲಿ ಅದಮಾರು ಶ್ರೀಮಠ ಇವರಿಗೆ ಕರ್ನಾಟಕ ಕವಿಕುಲತಿಲಕ ಪದವಿ ನೀಡಿತು. 1966-76 ದಶಕದಲ್ಲಿ ವರ್ಷಕ್ಕೊಂದರಂತೆ ಇವರ ಕವನ ಸಂಗ್ರಹಗಳು ಪ್ರಕಟಗೊಂಡವು. 'ಶ್ರೀಮಾತಾ (1968), 'ಬಾ ಹತ್ತರ (1969), 'ಇದು ನಭೋವಾಣಿ (1970), 'ವಿನಯ (1972) 'ಮತ್ತೆ ಶ್ರಾವಣ ಬಂತು (1973)-ಇವು ಕವನ ಸಂಕಲನಗಳು. ಜೊತೆಗೆ 'ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು (1968), ಅಲ್ಲದೆ ಇವರ ವಿಮರ್ಶಾ ಗ್ರಂಥಗಳ ಸಂಕಲನ 'ಸಾಹಿತ್ಯ ವಿರಾಟ್ ಸ್ವರೂಪ (1974) ಇವು ಕೂಡಾ ಪ್ರಕಟಗೊಂಡವು. ಇವರ ತೀರ ಇತ್ತೀಚಿನ ಕೃತಿ 'ಚತುರೋಕ್ತಿ (1978), ಚತುರ್ಮುಖ ಸಿದ್ಧಾಂತದ ದಶತದಿ ಛಂದಸ್ಸಿನ ಕವನ ಸಂಗ್ರಹ ಅನನ್ಯವಾಗಿದೆ. ಇವರ ಉಪನ್ಯಾಸಗಳು `ಮಾತೆಲ್ಲ ಜ್ಯೋತಿ 1971ರಲ್ಲೂ 'ಕುಮಾರವ್ಯಾಸ 1976ರಲ್ಲೂ ಪ್ರಕಟಗೊಂಡವು. 1966-72ರ ಅವಧಿಯಲ್ಲಿ ಅನುವಾದಕ್ಕೆ ತೊಡಗಿ 1966ರಲ್ಲಿ 'ಗುರುಗೋವಿಂದ ಸಿಂಗ್ ಮತ್ತು 1967ರಲ್ಲಿ 'ಟಾಗೋರರ ನೂರೊಂದು ಕವನಗಳನ್ನು, 1968ರಲ್ಲಿ 'ಕಬೀರ್ ವಚನಾವಳಿ, 1972ರಲ್ಲಿ 'ಭಗ್ನಮೂರ್ತಿ ಇವನ್ನು ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದರು. ಇವರು ಮಾಡಿದ ಇತರ ಅನುವಾದಗಳು ಮೂರು: 'ಉಪನಿಷತ್ ರಹಸ್ಯ (1928), 'ಭಾರತೀಯ ನವಜನ್ಮ (1936), ಮರಾಠಿಗೆ ತರ್ಜುಮೆ ಮಾಡಿದ ಕನ್ನಡ ಕಾದಂಬರಿ ಶಾಂತಲಾ (1972). 'ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ತ್ವೋಪದೇಶ ಸ್ವತಂತ್ರ ಕೃತಿ (1947).

	1964ರಲ್ಲಿ ಪ್ರಕಟಗೊಂಡ 'ನಾಕುತಂತಿ' ಕವನಸಂಗ್ರಹಕ್ಕೆ 1974ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿತು. ಈ ಪ್ರಶಸ್ತಿಯನ್ನು ಪಡೆದ ಎರಡನೆಯ ಕನ್ನಡ ಕವಿ ಇವರು. 1971ರಲ್ಲಿ ಇವರ 75ನೆಯ ಹುಟ್ಟುಹಬ್ಬ ಸೊಲ್ಲಾಪುರದಲ್ಲಿ ಸಾರ್ವಜನಿಕವಾಗಿ ಆಚರಿಸಲಾಯಿತು. 1975ರಲ್ಲಿ ಪುಣೆಯಲ್ಲಿ ಸನ್ಮಾನ. 1976ರಲ್ಲಿ ಕಾಶಿ ವಿಶ್ವವಿದ್ಯಾಪೀಠ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

	ಬೇಂದ್ರೆ ಅವರ ಕಾವ್ಯ ಇಂಗ್ಲಿಷ್ ಜರ್ಮನ್ ಭಾಷೆಗಳಿಗೆ ಅನುವಾದಗೊಂಡಿದೆ. ತಾವೇ ಕೆಲವು ಕವನಗಳನ್ನು ಇಂಗ್ಲಿಷ್, ಮರಾಠೀ ಭಾಷೆಗಳಿಗೆ ಅನುವಾದಿಸಿದ್ದಾರೆ. ಗೋಕಾಕ್, ಕೆ. ರಾಘವೇಂದ್ರರಾವ್, ಶಂಕರಮೊಕಾಶಿ ಪುಣೇಕರ ಜಿ.ಎಸ್..ಆಮೂರ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

	ಮೊದಲಿನಿಂದ ಇವರಲ್ಲಿದ್ದ ಭಾಷಾಶಾಸ್ತ್ರದ ಅಂತಃರಚನೆಯ ಅಭ್ಯಾಸ, ಸಾಂಖ್ಯದ ಅಭ್ಯಾಸಕ್ಕೆ ಪರಿವರ್ತನೆಗೊಂಡು, ಅದರ ನಿಶ್ಚಿತರೂಪ ಸುಮಾರು 1970ರಲ್ಲಿ ನಿಗದಿಗೊಂಡಿತು. ಅವರು ತಮ್ಮ ತತ್ತ್ವಶೋಧನೆಗಾಗಿ ಭೌತ-ರಸಾಯನ ವಿಜ್ಞಾನಗಳನ್ನು ವೇದ ವೇದಾಂಗಗಳನ್ನು ಅಭ್ಯಸಿಸತೊಡಗಿದರು. ಜಗತ್ತಿನ ಗುಣ-ಆಕೃತಿಗಳ ಮೂಲದಲ್ಲಿ ಇದ್ದ ಅವಿಭಾಜ್ಯ ಅಂಗವೆಂದರೆ ಸಂಖ್ಯೆ. ಜÁ್ಞನದ ಮೂಲವೇ ಸಂಖ್ಯೆ ಎಂದರು. ಸಂಖ್ಯೆಯ ಶುದ್ಧ ಜ್ಞಾನವನ್ನು ಸಾಂಖ್ಯ ಎಂದರು. ವಿದ್ವಾಂಸರನ್ನು ಸಂಖ್ಯಾವಂತರೆಂದು ಕರೆದರು. ಭಾರತೀಯ ತತ್ತ್ವಜ್ಞಾನ ಮತ್ತು ವೈದಿಕ ಸಾಹಿತ್ಯವೆಲ್ಲ ಈ ಸಾಂಖ್ಯದಲ್ಲಿ ಮುಪ್ಪುರಿಗೊಂಡಿವೆ ಎಂದು ಪ್ರತಿಪಾದಿಸಿದರು. 

	ಮುಂಬಯಿಯಲ್ಲಿ ಯಶಸ್ವಿ ಶಸ್ತ್ರಕ್ರಿಯೆ ಮಾಡಿಸಿಕೊಂಡ ಇವರು ದುರ್ದೈವ ವಶಾತ್ ಬೇರೆ ಸಂದಿಗ್ಧತೆಗಳು ತಲೆದೋರಿ ದಿನಾಂಕ 26-10-1981ರಂದು ನಿಧನರಾದರು.
 
	ಪರಾಕಿ', 'ಕಾವ್ಯ ವೈಖರಿ' (1982) 'ಬಾಲಬೋಧೆ, 'ತಾಲೆಕ್ಕಣಿಕಿ ತಾದೌತಿ' (1982), ಹಾಗೂ 'ಪ್ರತಿಬಿಂಬಗಳು (1987), - ಇವು ಮರಣೋತ್ತರ ಪ್ರಕಟವಾದ ಬೇಂದ್ರೆಯವರ ಕವನ ಸಂಗ್ರಹಗಳು. ಅಂಬಿಕಾತನಯದತ್ತರ ಸಮಗ್ರಕಾವ್ಯ 'ಔದುಂಬರ ಗಾಥೆ ಆರು ಸಂಪುಟಗಳಲ್ಲಿ 2003ರಲ್ಲಿ ಪ್ರಕಟವಾಯಿತು.
 
ಬೇಂದ್ರೆಯವರಲ್ಲಿ ಸೃಜನಶೀಲ ಮೇಧಾಶಕ್ತಿ, ಜೊತೆಗೆ ವಿಶ್ಲೇಷಣಾತ್ಮಕ ಧೀಶಕ್ತಿ ಎರಡೂ ಕೂಡಿದ್ದುವು. ಭಾರತದ ಹಾಗೂ ಕರ್ನಾಟಕದ ಜನಗಣಮನದಲ್ಲಿ ಬೇರೂರಿರುವ ಹಲವು ವಿಶಿಷ್ಟ ಸಾಂಸ್ಕøತಿಕ ಮೌಲ್ಯಗಳನ್ನು ಸೋಸಿ ತಂದ ಜೀವನದರ್ಶನದ ರಸಘಟ್ಟಿ ಇವರ ಕೃತಿಗಳಲ್ಲಿದೆ. ಪ್ರಪಂಚ ಕವಿಗಳ ಸಾಲಿನಲ್ಲೂ ಇವರಿಗೆ ಸ್ಥಾನವಿದೆಯೆಂಬುದು ನಿರ್ವಿವಾದ.			
(ಎಸ್.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ